ಚಿತ್ರ - ಪ್ರಶಾಂತ ಯಾವಗಲ್
ಗುಬ್ಬಚ್ಚಿ ಅಂದಾಕ್ಷಣ ನಮ್ಮ ಮನೆಯ ದೇವರ ಫೋಟೋಗಳ ಹಿಂದೆ, ತಾತ ಅಜ್ಜಿಯಂದಿರ ಫೋಟೋಗಳ ಹಿಂದೆ ಗೂಡು ಕಟ್ಟಿ, ನಮ್ಮಮ್ಮ, ಅಜ್ಜಿ ಕಾಳು-ಕಡಿಗಳನ್ನು ಸ್ವಚ್ಚಗೊಳಿಸುವಾಗ ಬಿದ್ದ ಕಾಳು-ಕಡಿಗಳನ್ನು ತಿಂದು ಸಂಸಾರ ದೂಗಿಸುತ್ತಿದ್ದ ಪುಟ್ಟ ಹಕ್ಕಿಗಳು ಕಣ್ಣಿನ ಮುಂದೆ ಬರುತ್ತವೆ. ಈ ಹಕ್ಕಿಗಳು ಎಲ್ಲೆಂದರಲ್ಲಿ ಕಾಣುತ್ತಿದ್ದವು. ಮನೆಯ ಫೋಟೋಗಳ ಹಿಂದೆ, ಮನೆಯ ಜಂತಿಗಳ ಮೇಲೆ, ಮಣ್ಣಿನ ಗೋಡೆಗಳ ಚಿಕ್ಕ ಪೊಟರೆಗಳಲ್ಲಿ, ಮಾರುಕಟ್ಟೆಯ ಕಿರಾಣಿ ಅಂಗಡಿಗಳಲ್ಲಿ ಕೂಡಿಟ್ಟ ಕಾಳಿನ ಚೀಲದಲ್ಲಿ, ನಮ್ಮ ಶಾಲೆಯಲ್ಲಿ ಹೀಗೆ ಎಲ್ಲೆಲ್ಲು ಚಿಂವ ಚಿಂವ ಎಂಬ ಶಬ್ದ ಕೇಳುತ್ತಿತ್ತು. ಮೇಷ್ಟ್ರು ಬರದಿದ್ದರೆ, ಗುಬ್ಬಚ್ಚಿ ಹಿಡಿಯುವ ಸಲುವಾಗಿ ಎಲ್ಲ ಕಿಟಕಿ, ಬಾಗಿಲು ಮುಚ್ಚಿ ಹರಸಾಹಸ ಪಟ್ಟು ಹಿಡಿಯುತ್ತಿದ್ದೆವು, ಹೀಗೆ ಮಾಡುವಾಗ ಸಿಕ್ಕಿಬಿದ್ದು ಸಾಕಷ್ಟು ಸಾರಿ ಗುರುಗಳ ಕೋಲಿನ ರುಚಿಯನ್ನು ನೋಡಿದ್ದಾಗಿದೆ. ರಾತ್ರಿ ಹೊತ್ತು ಅಜ್ಜಿಯ ಕಥೆಗಳಲ್ಲಿ ರಾಮಾಯಣ, ಮಹಾಭಾರತದ ಕಥೆಗಳೆಂದರೆ ಇಷ್ಟ ಆದರೆ ನಮಗೆ ಗುಬ್ಬಕ್ಕನ, ಕಾಗಕ್ಕನ ಕಥೆಗಳು ನಿದ್ದೆ ಬರಲು ಸಹಾಯ ಮಾಡುತ್ತಿದ್ದವು.
ಆಗಲು ಕೂಡ ಕೆಲವು ಅಲೆಮಾರಿ ಜನ ಇವುಗಳ ಬೇಟೆಯನ್ನಾಡುತ್ತಿದ್ದರು, ಬೇಟೆ ಆಡುವವರನ್ನು ಕಂಡರೆ ನಮ್ಮೂರಲ್ಲಿ ಹಿರಿಯರು ಬೈದು ಓಡಿಸುತ್ತಿದ್ದರು. ರಜೆ ಅಂತ ಇದ್ದರೆ, ಸುಗ್ಗಿಯ ಕಾಲದಲ್ಲಿ ಗುಬ್ಬಚ್ಚಿ ಓಡಿಸುವುದು ನಮ್ಮ ಒಂದು ಮುಖ್ಯ ಕೆಲಸವಾಗಿರುತ್ತಿತ್ತು. ಅವಾಗ ಇನ್ನು ಪ್ಲಾಸ್ಟಿಕ ನಿಧಾನವಾಗಿ ನಮ್ಮ ಜೀವನದಲ್ಲಿ ಕಾಲು ಇಡುತ್ತಿದ್ದ ಸಮಯ. ಇದನ್ನೇ ಒಂದು ಕೋಲಿಗೆ ಕಟ್ಟಿ ಬೆದರು ಬೊಂಬೆಗೆ ಪರ್ಯಾಯವಾಗಿ ಉಪಯೋಗಿಸುತ್ತಿದ್ದೆವು. ಪ್ಲಾಸ್ಟಿಕ್ ಮಾಡುವ ಸದ್ದಿಗೆ ಗುಬ್ಬಿಚ್ಚಿಗಳ ಗುಂಡಿಗೆ ನಿಂತು ಹೋಗುತ್ತಿದ್ದ ಕಾಲ ಅದು. ಗುಬ್ಬಚ್ಚಿಗಳು ವ್ಯವಸಾಯದ ಉತ್ಪನ್ನಗಳ ಮೇಲೆ ಅವಲಂಬಿಸಿದ್ದರಿಂದ ಮತ್ತು ಸುಮಾರು ಭಾಗದ ಉತ್ಪನ್ನವನ್ನ ತಿಂದು ಮುಗಿಸುತ್ತಿದ್ದರಿಂದ ಇವುಗಳನ್ನು ರೈತ ಶತ್ರು ಎಂದು ಕೂಡ ಕಾಣಲಾಗುತ್ತಿತ್ತು, ಆದರೂ ನಮ್ಮ ಹಿರಿಯರು ಪ್ರಕೃತಿಯನ್ನು ಪ್ರಿತಿಸುವವರಾದ್ದರಿಂದ ಅವುಗಳ ಮಾರಣ ಹೋಮಕ್ಕೆ ಎಂದು ಪ್ರಯತ್ನಿಸಿರಲಿಲ್ಲ. "ಬದುಕು ಬದುಕಲು ಬಿಡು" ಎಂಬ ಧೋರಣೆ ಅವರದು. ಇವತ್ತಿಗೂ ಕೂಡ ಯಾರು ಗುಬ್ಬಚ್ಚಿಗಳ ಮಾರಣ ಹೋಮ ಮಾಡದಿದ್ದರೂ ಕೂಡ ಅವುಗಳ ಉಳಿವು ಸಾಧ್ಯವಾಗುತ್ತಿಲ್ಲ ಕಾರಣ ಹಲವಾರು. ನಮ್ಮ ಮನೆಯ ನಾಯಿ ಬೆಕ್ಕುಗಳಿಗೆ ಆಗಾಗ ಗುಬ್ಬಚ್ಚಿಯ ಮಾಂಸದ ರುಚಿ ನೋಡಲು ಕೊರತೆಯಿರಲಿಲ್ಲ. ಹೀಗೆ ಗುಬ್ಬಚ್ಚಿಗಳು ಒಂದು ಕಡೆ ನಮಗೆ ಕಥೆಯಾದರೆ, ಇನ್ನೊಂದು ಕಡೆ ಅಮ್ಮ ಎಸೆದ ಬೇಡವಾದ ಕಾಳುಗಳನ್ನು ಸ್ವಚ್ಚಗೊಳಿಸುವ, ಮನೆಯಲ್ಲಿರುವ ಕ್ರೀಮಿ-ಕೀಟಗಳನ್ನು ತಿನ್ನುವ, ನಮ್ಮ ನಾಯಿ ಬೆಕ್ಕುಗಳಿಗೆ ಆಹಾರವಾಗುವ ಪರಿಸರ ಸಮತೋಲದ ಕೆಲಸ ಮಾಡುತ್ತಿದ್ದವು.
ಒಂದು ಸಮಯದಲ್ಲಿ ಜಗತ್ತಿನ್ನಾದ್ಯಂತ ಕಾಣಸಿಗುತ್ತಿದ್ದ ಈ ಪುಟ್ಟ ೨೫ ರಿಂದ ೪೦ ಗ್ರಾಂ ತೂಗುವ ಹಕ್ಕಿಗಳು ಇಂದು ಮಾಯವಾಗಲು ಹಲವಾರು ಕಾರಣಗಳಿವೆ. ಪ್ರತಿಯೊಬ್ಬ ಮನುಷ್ಯನಿಗೆ ಹೇಗೆ ಆವಾಸಕ್ಕೆ ಮತ್ತು ಆಹಾರಕ್ಕೆ ಕೊರತೆ ಆದರೆ ಬದುಕಲು ಅಸಾಧ್ಯವೋ ಹಾಗೆ ನಮ್ಮ ಪ್ರಾಣಿ-ಪಕ್ಷಿಗಳು ಕೂಡ. ಮನುಷ್ಯ ತನಗೋಸ್ಕರ ಮಾತ್ರ ಯಾವಾಗ ಬದುಕಲು ಶುರು ಮಾಡಿದನೋ ಅಂದಿನಿಂದಲೇ ಅವನಿಗೆ ಬೇಕಾದ ದನ ಕರುಗಳನ್ನು ಬಿಟ್ಟು ಮಿಕ್ಕೆಲ್ಲ ಪ್ರಾಣಿ-ಪಕ್ಷಿಗಳ ಬಗ್ಗೆ ಕನಿಕರ ತೋರಿಸದೆ ಅವುಗಳ ಆವಾಸದ ಮೇಲೆ ಮತ್ತು ಆಹಾರದ ಮೇಲೆ ತೀವ್ರ ಪರಿಣಾಮ ಬಿಳುವಂತೆ ಮಾಡತೊಡಗಿದ. ಇದರಿಂದ ಜೀವಿಸಲು ಆಗದೆ ಅದೆಷ್ಟೋ ಅಮೂಲ್ಯ ಜೀವಗಳು ಕಣ್ಮರೆಯಾದವು. ಇಂದು ಪ್ರಕೃತಿ ಈ ಮಟ್ಟಕ್ಕೆ ಬದಲಾವಣೆಯಾಗಲು ಇದೇ ಕಾರಣ.
ಮನುಷ್ಯನ ಪ್ರಗತಿಯ ಓಟ ಜನಸಂಖ್ಯೆ ಹೆಚ್ಚಾದಂತೆಲ್ಲ ಹುಚ್ಚಾಗಿ ಓಡತೊಡಗಿತು. ಮಣ್ಣು ಮತ್ತು ಕಲ್ಲಿನ ಜಾಗದಲ್ಲಿ, ಸಿಮೆಂಟಿನ, ಇಟ್ಟಿಗೆಯ ಮನೆಗಳು ಬೆಳೆದು ನಿಂತವು. ಇವುಗಳು ಗುಬ್ಬಚ್ಚಿಗಳ ಮನೆಯನ್ನು ಕಸಿದುಕೊಂಡರೆ. ನಮ್ಮ ಮನೆಯ ಬಾಗಿಲಿಗೆ ಪರಿಷ್ಕರಿಸಿದ ಧವಸ ಧಾನ್ಯಗಳು ಪ್ಲಾಸ್ಟಿಕ್ ಚೀಲದಲ್ಲಿ ಬಂದುದರಿಂದ ಗುಬ್ಬಚ್ಚಿಗಳ ಆಹಾರದ ಮೇಲೆ ದೊಡ್ಡ ಪೆಟ್ಟು ಬಿತ್ತು. ಇದು ಸಾಲದೆಂಬಂತೆ ನಮ್ಮ ಮನೆಗಳ ಸುತ್ತ ಇದ್ದ ಹಸಿರು ಮಾಯವಾಗಿ ಸಿಮೆಂಟಿನ ಕಾಡು ಬೆಳೆಯಿತು. ಹಸಿರು ಮಾಯವಾದಾಗ ಕ್ರೀಮಿ-ಕೀಟಗಳು ಮಾಯವಾದವು. ಇನ್ನು ಬದುಕಲು ಗುಬ್ಬಚ್ಚಿಗಳಿಗೆ ಉಳಿದದ್ದು ಕಾಡು ಮತ್ತು ಹಳ್ಳಿಗಳು. ಹೀಗಾಗಿ ಇಂದು ನಮ್ಮ ನಗರಗಳಲ್ಲಿ ಗುಬ್ಬಚ್ಚಿಗಳು ಮಾಯವಾಗಿವೆ. ನೋಡಲು ಹಳ್ಳಿ ಇಲ್ಲವೇ ಕಾಡುಗಳಿಗೆ ಹೋಗಬೇಕಾದ ಪರಿಸ್ಥಿತಿ ಬಂದೊದಗಿದೆ. ಈಗ ಹಳಿಗಳಲ್ಲೂ ಇವು ಕಾಣದಂತಾಗುವ ಅಪಾಯ ಬಂದೊದಗಿದೆ, ಅದೇನು ಎಂದರೆ ನಮ್ಮ ಕೃಷಿಕರು ಉಪಯೋಗಿಸುವ ರಾಸಾಯನಿಕ ಗೊಬ್ಬರ ಗುಬ್ಬಚ್ಚಿಗಳ ಜೀವ ತೆಗೆದುಕೊಳ್ಳುತ್ತಿವೆ. ಮೊಬೈಲ್ ಟಾವರ ಹಾವಳಿಯಿಂದ ಗುಬ್ಬಿಗಳು ಮಾಯವಾಗುತ್ತಿವೆ ಎಂಬ ಸುದ್ದಿಗೆ ವೈಜ್ಞಾನಿಕವಾಗಿ ಯಾವುದೇ ಪುರಾವೆಗಳಿಲ್ಲ. ಇನ್ನು ನೀರಿನ ಬಗ್ಗೆ ಹೇಳುವುದಾದರೆ ನಮ್ಮ ಹಳೆಯ ಮನೆಗಳಲ್ಲಿ ನೀರಿನ ಹೂಜಿಗಳಿರುತ್ತಿದ್ದವು. ಅವುಗಳು ಮತ್ತು ಬಾವಿಗಳು, ಕೆರೆ ಮತ್ತು ಕಾಲುವೆಗಳು ಪ್ರಾಣಿ ಪಕ್ಷಿಗಳ ನೀರಿನ ದಾಹವನ್ನು ತಿರಿಸುತ್ತಿದ್ದವು, ಆದರೆ ಇಂದು ನಮ್ಮ ಕೆರೆಗಳು ಬತ್ತಿಹೋಗಿವೆ, ಬಾವಿಗಳ ಜಾಗದಲ್ಲಿ ಕೊಳವೆ ಬಾವಿಗಳ ಹಾವಳಿ ಹೆಚ್ಚಾಗಿದೆ, ಕಾಲುವೆಗಳ ಜಾಗದಲ್ಲಿ ಕೊಳವೆಗಳ ಮೂಲಕ ನೀರು ಹರಿಯುತ್ತದೆ, ಹೂಜಿಗಳ ಜಾಗದಲ್ಲಿ ಸಿಂಟ್ಯಾಕ್ಸ್ ಟ್ಯಾಂಕುಗಳು ನಮ್ಮ ಮನೆಗಳ ಮೇಲೆ ರಾರಾಜಿಸುತ್ತಿವೆ.
ಮೊಹಮ್ಮದ ದಿಲಾವರ ಎಂಬ ಯುವಕ ಈ ಗುಬ್ಬಚ್ಚಿಗಳ ಉಳಿವಿಗಾಗಿ "ನೆಚರ ಫಾರೆವರ್ ಸೊಸೈಟಿ" ಎಂಬ ಸಂಸ್ಥೆ ಕಟ್ಟಿಕೊಂಡು ಹೋರಾಡುತ್ತಿದ್ದಾರೆ. ಇವರು ಹೇಳುವ ಪ್ರಕಾರ "ಗುಬ್ಬಚ್ಚಿಗಳು ನಗರ ಮತ್ತು ಹಳ್ಳಿಗಳ ಜೀವ ವೈವಿಧಿತೆಯ ಸಂಕೇತ, ಗುಬ್ಬಚ್ಚಿಗಳು ಕ್ಯಾನರಿ ಎಂಬ ಹಕ್ಕಿಯು ಗಣಿ ಸುರಂಗಗಳಲ್ಲಿ ವಹಿಸುವ ಪಾತ್ರವನ್ನು ನಮ್ಮ ನಗರ ಹಳ್ಳಿಗಳಲ್ಲಿ ವಹಿಸುತ್ತವೆಯಂತೆ." ನಮ್ಮಲ್ಲಿ ಸುಮಾರು ಜನರಿಗೆ ಕ್ಯಾನರಿ ಹಕ್ಕಿಯ ಬಗ್ಗೆ ಗೊತ್ತಿಲ್ಲ. ಹಿಂದೆ ಇಂಗ್ಲೆಂಡ ಮತ್ತು ಅಮೇರಿಕಗಳಲ್ಲಿ ಸುರಂಗದಲ್ಲಿ ಕೆಲಸ ಮಾಡುವ ಗಣಿ ಕಾರ್ಮಿಕರು ಆಮ್ಲಜನಕದ ವ್ಯವಸ್ಥೆ ಇಲ್ಲದೆ ಈ ಹಕ್ಕಿಗಳ ಮೇಲೆ ಅವಲಂಬತಿರಾಗಿದ್ದರು.
ಕ್ಯಾನರಿ ಹಕ್ಕಿ ಎಲ್ಲಿಯವರೆಗೂ ಹಾಡಿಕೊಂಡು ಇರುವುದೋ ಅಲ್ಲಿಯವರೆಗೂ ಆಮ್ಲಜನಕ ದೊರೆಯುವುದೆಂದು ಮತ್ತು ಎಲ್ಲಿ ಅದು ಹಾಡುವುದನ್ನು ನಿಲ್ಲಿಸಿ ಸಾಯುವಂತೆ ಒದ್ದಾಡುವುದೋ ಅಥವಾ ಸಾಯುವುದೋ ಅಲ್ಲಿ ವಿಷಕಾರಿ ಅನಿಲಗಳಾದ ಮಿಥೇನ್ ಅಥವಾ ಕಾರ್ಬನ್ ಮೋನೋಕ್ಸೈಡ ಇದೆಯೆಂದು ತಿಳಿದು ತಮ್ಮ ಜೀವ ಕಾಪಾಡಿಕೊಂಡು ವಾಪಸಾಗುತ್ತಿದ್ದರು. ಅದೇ ರೀತಿ ಗುಬ್ಬಚ್ಚಿಗಳು ನಗರದ ಮತ್ತು ಹಳ್ಳಿಗಳ ಸ್ವಾಸ್ಥ್ಯದ ಪ್ರತಿಕವಾಗಿವೆ ಎಂದು ಹೇಳುತ್ತಾರೆ.
ಹಾಗೆ ನೋಡಿದರೆ ನಮ್ಮ ನರಗಳಿಂದ ಗುಬ್ಬಚ್ಚಿಗಳು ಮಾಯವಾಗಿ ವರ್ಷಗಳೇ ಕಳೆದಿವೆ. ಇದರರ್ಥ ನಮ್ಮ ನಗರಗಳ ಸ್ವಾಸ್ಥ್ಯ ಕೆಟ್ಟಿದೆಯೇ? ಹೌದು ಎನ್ನುತ್ತದೆ ನಮ್ಮ ಜೀವನಶೈಲಿ. ನಮ್ಮಲ್ಲಿ ಸುಮಾರು ಜನರಿಗೆ ಶ್ವಾಸಕೋಶದ ತೊಂದರೆ ಇದೇ, ಅಲರ್ಜಿಗಳೆಂಬ ಭೂತಗಳು ಎಲ್ಲರನ್ನು ಕಾಡುತ್ತಿವೆ. ಸ್ವಚ್ಚ ಗಾಳಿ ಇಲ್ಲ. ನೀರಿನ ಗುಣಮಟ್ಟ ಕೆಟ್ಟಿದೆ, ಕೊಳವೆ ಭಾವಿಗಳನ್ನು ಸಾವಿರ ಅಡಿ ಕೊರೆದರು ನೀರು ಸಿಕ್ಕುತ್ತಿಲ್ಲ. ಇವೆಲ್ಲ ಸಾಕಲ್ಲವೇ ನಮ್ಮ ಪರಿಸರದ ಗುಣಮಟ್ಟ ತೋರಲು. ನಾವುಗಳು ಇಗಲಾದರು ಎಚ್ಚೆತ್ತುಕೊಂಡು ನಮ್ಮ ಸುತ್ತ ಉಳಿದಿರುವ ೪ ಪ್ರತಿಶತ ಕಾಡನ್ನಾದರು ಉಳಿಸಿ ಬೆಳೆಸಬೇಕು. ನಮ್ಮ ಮನೆಗಳ ಮೇಲೆ ಪಕ್ಷಿಗಳಿಗಾಗಿ ಸ್ವಲ್ಪ ಕಾಳು ಮತ್ತು ನೀರಿನ ವ್ಯವಸ್ಥೆ ಮಾಡಿ ಇಡಬೇಕು. ನಮ್ಮ ಸುತ್ತ ಪ್ರಾದೇಶಿಕ ಸಸಿಗಳನ್ನು ಬೆಳೆಸಬೇಕು ಏಕೆಂದರೆ ನಮ್ಮ ಹಕ್ಕಿಗಳನ್ನು ಸೆಳೆಯುವಲ್ಲಿ ಇವುಗಳ ಪಾತ್ರ ಅತಿ ಮುಖ್ಯ. ವಿದೇಶಿ ಸಸಿಗಳು ನೋಡಲು ಅಂದವಾಗಿದ್ದರು ಹಕ್ಕಿಗಳನ್ನು ಸೆಳೆಯುವಲ್ಲಿ ವಿಫಲವಾಗುತ್ತವೆ. ರಾಸಾಯನಿಕ ಗೊಬ್ಬರಗಳ ಬದಲಿಗೆ ಸಾವಯವ ಗೊಬ್ಬರ ಬಳಸಿ ಸಸಿಗಳನ್ನು ಬೆಳೆಸಬೇಕು, ಸಾವಯವ ಕೃಷಿಗೆ ಒತ್ತು ನೀಡಬೇಕು. ಇದೆಲ್ಲ ಮಾಡಲು ಪರಿಸರ ಉಳಿಸುವ, ಪ್ರಾಣಿ ಪಕ್ಷಿ ಬೆಳೆಸುವ ಒತ್ತಾಸೆ ಇರಬೇಕು. ಏನಂತಿರ?
ಲೇಖನ - ಪ್ರಶಾಂತ ಯಾವಗಲ್
No comments:
Post a Comment
Note: Only a member of this blog may post a comment.