ದಟ್ಟ ಹಸಿರಾದ ಕಾಡುಗಳು ಬೇಸಿಗೆಯ ದಿನಗಳು ಸಮೀಪಿಸಿದಂತೆ ಒಣಗಿ ಬರಡಾಗಿ ನಿಂತಿವೆ. ಕಾಡಿನ ಹಳ್ಳ ಕೊಳ್ಳಗಳು, ತೊರೆಗಳು ಸೂರ್ಯನ ತಾಪಕ್ಕೆ ಬರಿದಾಗಿವೆ. ಒಣಗಿ ನಿಂತ ಕಾನನದ ಮಧ್ಯದಿಂದ ಬಿಳಿ ಹೊಗೆ ಮೋಡದಂತೆ ಮೇಲೇಳುತ್ತಿದೆ. ನೋಡನೋಡುತ್ತಿದ್ದಂತೆ ಕಪ್ಪು ಬಣ್ಣಕ್ಕೆ ತಿರುಗಿ ಅಕಾಶದೆತ್ತರಕ್ಕೆ ತಲುಪಿದ ಹೊಗೆಯ ಸುತ್ತಲೂ ಪಕ್ಷಿಗಳು ಭಯದಿಂದ ಚೀತ್ಕರಿಸುತ್ತಾ ಹಾರಾಡುತ್ತಿವೆ. ಕಾಡಿನಿಂದ. ಆನೆಗಳು ಘೀಳಿಡುವ ಸದ್ದು ಇತರೆ ಪ್ರಾಣಿಗಳ ಕೂಗಿನೊಂದಿಗೆ ಬೆರೆತು ವಾತಾವರಣ ಭಯದಿಂದ ಕೂಡಿದೆ. ಬೆಂಕಿಯ ಕೆನ್ನಾಲಿಗೆಯು ಒಣಗಿದ ಹುಲ್ಲು, ಗಿಡಮರಗಳನ್ನಲ್ಲದೆ, ಸಣ್ಣಪುಟ್ಟ ಪ್ರಾಣಿಗಳು, ಸರೀಸೃಪಗಳು, ಪಕ್ಷಿಗಳೆಲ್ಲವನ್ನೂ ಜೀವಂತವಾಗಿ ದಹಿಸುತ್ತ ತನ್ನ ಹಸಿವನ್ನು ನೀಗಿಸಿಕೊಳ್ಳಲು ವೇಗವಾಗಿ ಹಬ್ಬುತ್ತಿದೆ. ಉರಿದುಹೋದ ಕಾಡಿನಲ್ಲಿ ಉಳಿದಿರುವುದು ಬರೀ ಹೊಗೆಯಾಡುತ್ತಿರುವ ಬೂದಿ. ಜೀವ ಸೆಲೆಯೇ ಉರಿದು ನಾಶವಾದಂತೆ ಕಾಣುತ್ತಿದೆ. ಕಾಡ್ಗಿಚ್ಚು! ಪ್ರತೀ ಬೇಸಿಗೆಯಲ್ಲಿ ಅಪಾಯದ ಅಂಚಿನಲ್ಲಿರುವ ನಮ್ಮ ಕಾಡುಗಳಿಗೆ ಮರಣದೇಟಿನಂತೆ ಕಾಡುವ ಆಪತ್ತು!
ನಮ್ಮ ನಾಡಿನ ಕಾಡುಗಳು ಮಲೆನಾಡಿನ ದಟ್ಟ ಹಸಿರು ಕಾಡುಗಳು, ಎಲೆ ಉದುರುವ ಕಾಡುಗಳು, ಹಾಗು ಕುರುಚಲು ಕಾಡುಗಳಾಗಿ ವಿಂಗಡನೆಗೊಂಡು, ಸುಮಾರು 38000 ಚ.ಕಿಮೀಯಷ್ಟು (ಸುಮಾರು 20%) ಭೂಪ್ರದೇಶ ಹೊಂದಿವೆ. ವನ್ಯ ಪ್ರಾಣಿಗಳಿಗೆ ಆಶ್ರಯತಾಣಗಳಾಗಿ ಅಲ್ಲದೆ, ಗಿರಿಶೃಂಗಗಳಿಗೆ ಹಸಿರು ಹೊದಿಕೆಯ ಹೊದಿಸಿ, ಪ್ರಕೃತಿಯ ರಮಣೀಯತೆಯನ್ನು ಕಣ್ಮನಸ್ಸುಗಳಿಗೆ ತುಂಬುವ ಈ ಕಾಡುಗಳು ನೈಸರ್ಗಿಕ ಸಮತೋಲನಕ್ಕೆ ಅತ್ಯಂತ ಅವಶ್ಯಕ. ಕರ್ನಾಟಕದ ಪಶ್ಚಿಮಘಟ್ಟಗಳು ಹಾಗು ರಕ್ಷಿತಾರಣ್ಯಗಳಾದ ಬಂಡೀಪುರ, ನಾಗರಹೊಳೆ, ಅಣಶಿ ಮುಂತಾದ ಕಾಡುಗಳು ಹಲವಾರು ಪ್ರಾಣಿಪಕ್ಷಿಗಳಿಗೆ ಆಶ್ರಯತಾಣವಾಗಿವೆ. ವಿನಾಶದ ಅಂಚಿನಲ್ಲಿರುವ ಪ್ರಭೇದಗಳಾದ ಹುಲಿ, ಆನೆ, ಸಿಂಗಳೀಕ, ಕೆನ್ನಾಯಿ, ಮಂಗಟ್ಟೆ ಮುಂತಾದವುಗಳಲ್ಲದೆ, ಜಿಂಕೆ, ಕಡವೆ, ಕಾಡುಹಂದಿ, ಕರಡಿ ಮುಂತಾದ ಜಗತ್ತಿನ ಸುಮಾರು 22000 ಗುರುತಿಸಲ್ಪಟ್ಟಿರುವ ಹಾಗು ಸುಮಾರು 100000ದಷ್ಟು ಇನ್ನೂ ಗುರುತಿಸಬೇಕಾಗಿರುವ ಪ್ರಭೇಗಳು ಈ ಕಾಡುಗಳಲ್ಲಿವೆ. ಸುಮಾರು 120 ಸಸ್ತನಿಗಳು, 4500 ಹೂವಿನ ಗಿಡಗಳ ಪ್ರಭೇದಗಳು, ಸುಮಾರು 500 ಪಕ್ಷಿ ಪ್ರಭೇದಗಳು, ಸುಮರು 160 ಸರೀಸೃಪ ಜಾತಿಗೆ ಸೇರಿದ ಪ್ರಾಣಿಗಳು, ಸುಮಾರು 180 ಮೀನಿನ ಪ್ರಭೇದಗಳು, 70 ಕಪ್ಪೆ ಪ್ರಭೇದಗಳು ನಮ್ಮ ನಾಡಿನ ಕಾಡುಗಳಲ್ಲಿ ನೆಲೆ ಕಂಡುಕೊಂಡಿವೆ.
ಆದರೆ, ನೆಮ್ಮದಿಯ ನೆಲೆಯಾಗಬೇಕಾದ ಈ ಕಾಡುಗಳು ಮಾನವನ ದುರಾಸೆ, ಮೂರ್ಖತನದಿಂದಾಗಿ ವಿನಾಶದತ್ತ ಸರಿಯುತ್ತಿವೆ. ಈ ಕಾಡುಗಳಿಗೆ ಹಾಗು ಇಲ್ಲಿ ವಾಸಿಸುವ ಪ್ರಾಣಿಗಳಿಗೆ ಇಂದು ಹಲವಾರು ಕಂಟಕಗಳು ಬಾಧಿಸುತ್ತಿವೆ. ಕಳ್ಳಬೇಟೆ, ಅತಿಕ್ರಮಣ, ವಾಸಸ್ಥಳ ನಾಶ, ಆಹಾರ ಕೊರತೆಯಂತಹ ಸಮಸ್ಯೆಗಳು ಇಂದು ಬೃಹತ್ತಾಗಿ ಬೆಳೆದುನಿಂತಿವೆ. ಈ ಪಟ್ಟಿಯಲ್ಲಿ ಸೇರುವ ಮತ್ತೊಂದು ಬೃಹತ್ ಸಮಸ್ಯೆಯೆಂದರೆ, 'ಕಾಡ್ಗಿಚ್ಚು'. ಬೇಸಿಗೆಯಲ್ಲಿ ಉದುರಿ ನಿಂತ ತರಗೆಲೆ, ಒಣಗಿದ ಹುಲ್ಲು, ಪೊದೆ ಹಾಗು ಗಿಡಮರಗಳನ್ನು ತನ್ನ ಕೆನ್ನಾಲಿಗೆ ಚಾಚುತ್ತಾ, ಅಗ್ನಿದೇವನು ತನ್ನ ಹವಿಸ್ಸನ್ನು ಸ್ವೀಕರಿಸುವಂತೆ ಬೆಂಕಿಯು ಕಾಡನ್ನು ಆಹುತಿ ತಗೆದುಕೊಳ್ಳುತ್ತದೆ. ನೂರಾರು ಎಕರೆ ಕಾಡು, ಅದರಲ್ಲಿರುವ ಪ್ರಾಣಿಗಳು ಪ್ರತಿ ಬೇಸಿಗೆಯಲ್ಲಿ ಕಾಡ್ಗಿಚ್ಚಿಗೆ ಬಲಿಯಾಗುತ್ತಿವೆ.
ದಟ್ಟವಾದ ಕಪ್ಪು ಹೊಗೆಯನ್ನು ಆಗಸದೆತ್ತರಕ್ಕೆ ಹರಡುತ್ತಾ ಗಾಳಿಬೀಸಿದಂತೆ ಕ್ಷಣಮಾತ್ರದಲ್ಲಿ ಹರಡುವ ಕಾಡ್ಗಿಚ್ಚಿನಲ್ಲಿ ವೈಜéಾನಿಕವಾಗಿ 2 ವಿಧ. ಮೊದಲನೆಯದಾಗಿ, ನೆಲಬೆಂಕಿ ಅಥವಾ ground fire . ಇದರಲ್ಲಿ ಎತ್ತರದ ಮರಗಿಡಗಳು ಸುಡುವುದಿಲ್ಲ. ಒಣಗಿದ ತರಗೆಲೆ, ಹುಲ್ಲು, ಸಣ್ಣಪುಟ್ಟ ಪೊದೆಗಳು, ಲಾಂಟಾನ, ಹಾಗು ಸಣ್ಣ ಪ್ರಾಣಿಗಳು ಬಲಿಯಾಗುತ್ತವೆ. ಗಾಳಿ ಹಾಗು ಒಣಗಿದ ವಸ್ತು ಸಿಕ್ಕಂತೆ ಇದು ನೆಲಮಟ್ಟದಲ್ಲಿ ವೇಗವಾಗಿ ಹರಡುತ್ತದೆ. ಎರಡನೆಯದು ಮರಗಳ ಸಮೂಹದ ತುದಿಯಲ್ಲಿ ಹರಡುವ ಬೆಂಕಿ (crown fire). ಇದು ಕೂಡ ಗಾಳಿ ಹಾಗು ಉರಿವ ವಸ್ತುಗಳು ಸಿಕ್ಕಂತೆ ದಟ್ಟವಾದ ಕಾಡುಗಳಲ್ಲಿ ಬಹು ವೇಗವಾಗಿ ಹರಡುತ್ತದೆ. ಆದರೆ ಇದರಲ್ಲಿ ಕಾಡಿನ ಎತ್ತರದ ಮರಗಳೂ ಹಾಗು ದೊಡ್ಡ ದೊಡ್ಡ ಪ್ರಾಣಿಗಳೂ ಬಲಿಯಾಗುವುದಿದೆ.
ಇನ್ನು ಬೆಂಕಿಯ ಮೂಲದ ಆಧಾರದಲ್ಲಿ 2 ವಿಧಗಳಿವೆ. ನೈಸಗರ್ಿಕ ಕಾಡ್ಗಿಚ್ಚು ಹಾಗು ಮಾನವ ನಿಮರ್ಿತ ಕಾಡ್ಗಿಚ್ಚು. ಒಣವಸ್ತುಗಳಿಗೆ ಮಿಂಚು ಬಡಿಯುವುದರಿಂದ ಅಥವಾ ಅಧಿಕ ತಾಪಮಾನ ಹಾಗು ಒತ್ತಡದಲ್ಲಿ ಒಣಗಿದ ವಸ್ತುಗಳ ಮಧ್ಯೆ ಉಂಟಾಗುವ ಘರ್ಷಣೆ ಬೆಂಕಿಯ ಜನ್ಮಕ್ಕೆ ನೈಸಗರ್ಿಕವಾಗಿ ಕಾರಣವಾಗಬಹುದು. ಮಿಂಚಿನಿಂದ ಬೆಂಕಿ ಬಿದ್ದರೆ ನಂತರ ಸುರಿಯುವ ಮಳೆಯೇ ಬಹಳಷ್ಟು ಪ್ರಕರಣಗಳಲ್ಲಿ ಕಾಡ್ಗಿಚ್ಚನ್ನು ನಂದಿಸಿಬಿಡುತ್ತದೆ. ಆದರೆ ನಮ್ಮ ನಾಡಿನ ಕಾಡುಗಳಲ್ಲಿ ನೈಸಗರ್ಿಕವಾಗಿ ಉಂಟಾಗುವ ಬೆಂಕಿ ಇಲ್ಲವೇ ಇಲ್ಲವೆಂದು ಹೇಳಬಹುದು. ಇನ್ನು ಎರಡನೆಯದು ಮಾನವನಿಂದುಂಟಾಗುವ ಬೆಂಕಿ. ಇಲ್ಲಿ ಮಾನವನ ದುರಾಸೆಯೇ ಬೆಂಕಿಯ ಮೂಲಗಳು. ಕಾಡಿಗೆ ಬೆಂಕಿ ಹಚ್ಚಿ ಹೆದರಿ ಓಡುವ ಪ್ರಾಣಿಗಳನ್ನು ಬೇಟೆಯಾಡಲು ಕಳ್ಳಬೇಟೆಗಾರರು ಪ್ರಯತ್ನ ನಡೆಸುವುದಿದೆ. ಒಂದೆಡೆ ಉರುಳು ಹಾಕಿ ಇನ್ನೊಂದೆಡೆಯಿಂದ ಬೆಂಕಿ ಹಚ್ಚಿ ಪ್ರಾಣಿಗಳನ್ನು ಉರುಳಿನೆಡೆಗೆ ಓಡಿಸಿವ ತಂತ್ರವನ್ನು ಬೇಟೆಗಾರರು ಉಪಯೋಗಿಸುತ್ತಾರೆ. ಅಲ್ಲದೆ, ಇಲಾಖೆಯ ಗಮನವನ್ನು ಬೆಂಕಿಯೆಡೆಗೆ ಸೆಳೆದು ಇನ್ನೊಂದೆಡೆ ಬೇಟೆಗೆ ಹೊಂಚುಹಾಕುವ ಕಳ್ಳನೆಪವೂ ಇರುತ್ತದೆ.
ಬಹಳ ಹಿಂದಿನಿಂದಲೂ ಕಾಡುಗಳು ಅದರ ಸುತ್ತಲಿನ ಹಳ್ಳಿಗಳ ಆಕಳುಗಳಿಗೆ ಮೇವಿನ ತಾಣಗಳಾಗಿವೆ. ಇಂದು ಬಂಡೀಪುರ ರಾಷ್ಟ್ರೀಯ ಉದ್ಯಾನಕ್ಕೆ ಪ್ರತಿದಿನವೂ ಸುಮಾರು 12000ಕ್ಕೂ ಅಧಿಕ ಜಾನುವಾರುಗಳು ಮೇವಿಗಾಗಿ ಪ್ರವೇಶಿಸುತ್ತವೆ. ಈ ಜಾನುವಾರುಗಳ ಮೇವಿಗೆ ಹೊಸ ಚಿಗುರು ಬೆಳೆಯಲೆಂದು ದನಗಾಹಿಗಳು ಕಾಡಿಗೆ ಬೆಂಕಿಯಿಡುವುದುಂಟು. ಹೀಗೆ ಪ್ರವೇಶಿಸುವ ಪ್ರಾಣಿಗಳಿಂದ ಅರಣ್ಯವಾಸಿಗಳಿಗೆ ಮೇವಿನಕೊರತೆ ಉಂಟಾಗುವುದಲ್ಲದೆ ಕಾಲುಬಾಯಿ ರೋಗದಂತಹ ಪ್ರಾಣಾಂತಿಕ ರೋಗಗಳೂ ಕಾಡಿನಲ್ಲಿ ಹರಡುತ್ತವೆ. ಇದಲ್ಲದೆ ಅರಣ್ಯ ಉತ್ಪನ್ನಗಳಾದ ನೆಲ್ಲಿಕಾಯೆ, ಜೇನು, ಮಹುವ ಮುಂತಾದವನ್ನು ಸಂಗ್ರಹಿಸುವವರು ಅವುಗಳನ್ನು ಸಂಗ್ರಹಿಸಲು ಅನುಕೂಲವಾಗಲೆಂದು ಬೆಂಕಿಹಚ್ಚುವುದುಂಟು. ಇವಿಷ್ಟೇ ಅಲ್ಲದೆ ಇಲಾಖೆಯಮೇಲಿನ ಸೇಡಿನಿಂದ ಅಥವಾ ಕಳ್ಳ ಒತ್ತುವರಿ ಮಾಡುವ ಭೂದಾಹಿಗಳು ಕಾಡಿಗೆ ಬೆಂಕಿಯಿಡುವ ಪ್ರಕರಣಗಳೂ ಇವೆ. ಕೆಲವೊಮ್ಮೆ ನಿರ್ಲಕ್ಷತನದಿಂದ ಎಸೆದ ಬೀಡಿ ಅಥವಾ ಇನ್ಯಾವುದೋ ಉರಿಯುವ ವಸ್ತು ಕೂಡ ಬೃಹತ್ ಪ್ರಮಾಣದಲ್ಲಿ ಕಾಡಿನ ನಾಶಕ್ಕೆ ಕಾರಣವಾಗಬಹುದು. ಅರಣ್ಯ ಕಾಯ್ದೆಯ ಪ್ರಕಾರ ಕಾಡಿನಲ್ಲಿ ಹಾಗು ಕಾಡಿನ ಅಂಚಿನಿಂದ 180 ಮೀ ಸುತ್ತಳತೆಯವರೆಗೂ ನವೆಂಬರ್ ತಿಂಗಳಿನಿಂದ ಜೂನ್ವರೆಗೂ ಪೂರ್ವಾನುಮತಿಯಿಲ್ಲದೆ ಬೆಂಕಿಹಚ್ಚುವುದು ಅಪರಾಧವಾಗುತ್ತದೆ.
ಕಾಡಿನಲ್ಲಿ ಉಂಟಾಗುವ ಬೆಂಕಿಯಿಂದ ಕಾಡಿಗೆ, ಕಡುಪ್ರಾಣಿಗಳಿಗೆ ಅಗುವ ಹಾನಿ ಅಪಾರ. ಹುಲ್ಲು, ಎಲೆ, ಸಣ್ಣಪುಟ್ಟ ಗುಡಮರಗಳು ಬೆಂಕಿಯಲ್ಲಿ ಉರಿದು ಹೋಗುವುದರಿಂದ ಸಸ್ಯಾಹಾರಿ ಪ್ರಾಣಿಗಳಿಗೆ ಆಹಾರವಿಲ್ಲದಂತಾಗುತ್ತದೆ. ಬೇಸಿಗೆಯ ಬೇಗೆಯಲ್ಲಿ ಮೊದಲೇ ಬಸವಳಿದ ಪ್ರಾಣಿಗಳು ಆಹಾರ ಕೊರತೆ ಹಾಗು ಬೆಂಕಿಯ ತಾಪದಿಂದ ತಪ್ಪಿಸಿಕೊಳ್ಳಲು ನಾಡಿನೆಡೆಗೆ, ರೈತರ ಬಳೆಯೆಡೆಗೆ ನುಗ್ಗುತ್ತವೆ. ರೈತರ ಹೊಲಗಳಿಗೆ ಕಾಡುಪ್ರಾಣಿಗಳ ದಾಳಿ ಹೆಚ್ಚಾಗಲು ಕಾಡ್ಗಿಚ್ಚು ಪ್ರಮುಖ ಕಾರಣ. ಇದಲ್ಲದೆ ಸಣ್ಣಸಣ್ಣ ಪ್ರಾಣಿಗಳು, ಸರೀಸೃಪಗಳು, ಪಕ್ಷಿಗಳು, ಕೀಟಗಳು ಹಾಗು ಪ್ರಕೃತಿಯ ಸಮತೋಲನದಲ್ಲಿ ಪ್ರಮುಖಪಾತ್ರವಹಿಸುವ ಜೀವಜಂತುಗಳು ನಾಶವಾಗುಹೋಗುತ್ತವೆ.
ಕಾಡ್ಗಿಚ್ಚು, ಅದರಲ್ಲೂ ನಮ್ಮ ಕಡುಗಳಲ್ಲಿ ಕಂಡುಬರುವ ನೆಲಬೆಂಕಿ, ಬೆಳೆಯುವ ಕಾಡಿಗೆ ಬಹಳ ಮಾರಕವಾದದ್ದು. ನೆಲಕ್ಕುದುರಿ, ಚಿಗುರಲು ಮಳೆಗಾಗಿ ಕಾದುನಿಂತ ಬೀಜಗಳು, ಚಿಗುರಿನಿಂತ ಸಸ್ಯಗಳು, ಸಣ್ಣಪುಟ್ಟ ಗಿಡಮರಗಳು ಬೆಂಕಿಯಲ್ಲಿ ನಾಶವಾಗುತ್ತವೆ. ಅಲ್ಲದೆ, ಬೆಂಕಿಯನ್ನು ತಡೆಯುವ ಸಾಮಥ್ರ್ಯವುಳ್ಳ ಪ್ರಭೇದಗಳು ಹೆಚ್ಚಾಗಿ ಕಾಡಿನ ವೈವಿಧ್ಯತೆ ನಾಶವಾಗುತ್ತದೆ. ಲಾಟಾನ, ಪಾಥರ್ೆನಿಯಂನಂತಹ ಕಳೆಗಳು ಹೆಚ್ಚಾಗಿ ಕಾಡಿಗೆ, ಕಡುಪ್ರಾಣಿಗಳಿಗೆ ಮಾರಕವಗುತ್ತದೆ. ಹಲವು ಬಾರಿ ಬೆಂಕಿಯಲ್ಲಿ ಉರಿದ ಕಾಡಿನಲ್ಲಿ ಚಿಗುರು ಮರಗಳು, ಸಸ್ಯಗಳು ಇಲ್ಲದೆ ವಯಸ್ಸಾದ ಮರಗಳು ಮಾತ್ರ ಉಳಿದಿರುತ್ತವೆ. ಈ ವಯಸ್ಸಾದ ಮರಗಳು ಉರುಳಿದಂತೆ ಮತ್ತೆ ಚಿಗುರುವ ಸಸ್ಯಗಳಿಲ್ಲದೆ ಕಾಡು ನಾಶವಾಗುತ್ತದೆ.
ಪ್ರತಿ ವರ್ಷವೂ ನಮ್ಮ ನಾಡಿನ ಕಾಡುಗಳಲ್ಲಿ ಕಾಡ್ಗಿಚ್ಚಿನ ಪ್ರಕರಣಗಳು ಹೆಚ್ಚಾಗುತ್ತಿವೆ. ಕೇಂದ್ರ ಅರಣ್ಯ ಮತ್ತು ಪ್ರಕೃತಿ ಸಚವಾಲಯದ ಪ್ರಕಾರ ಭಾರತದಾದ್ಯಂತ 2009ರಲ್ಲಿ ಒಟ್ಟು ಸುಮಾರು 26118 ಕಾಡ್ಗಿಚ್ಚಿನ ಪ್ರಕರಣಗಳು ವರದಿಯಾಗಿವೆ. 2005ರಲ್ಲಿ ಇದ್ದ ಇದರ ಸಂಖ್ಯೆ ಸುಮಾರು 8431.
ಅರಣ್ಯ ಇಲಾಖೆ ಕಾಡ್ಗಿಚ್ಚನ್ನು ತಡೆಯಲು ಹಾಗು ಅದನ್ನು ನಿಯಂತ್ರಿಸಲು ಹಲವು ಕ್ರಮಗಳನ್ನು ಕೈಗೊಳ್ಳುತ್ತದೆ. ಬೇಸಿಗೆ ಸಮೀಪಿಸಿದಂತೆ ವೀಕ್ಷಣಾತಂಡಗಳನ್ನು ರಚಿಸಿ ಕಾಡಿನಮೇಲೆ ನಿಗಾವಹಿಸುವುದು, ಬೀಟ್ಗಳನ್ನು ಹೆಚ್ಚಿಸುವುದು, ಕಾಡ್ಗಿಚ್ಚು ಹರಡದಂತೆ ತಡೆಯಲು ಕಾಡನ್ನು ವಿಂಗಡಿಸುವುದು ಹಾಗು ಬೆಂಕಿ ಬಿದ್ದಾಗ ಅದರ ಜಾಗವನ್ನು ಶೀಘ್ರವಾಗಿ ಗುರುತಿಸಿ ಅಲ್ಲಿಗೆ ತಂಡಗಳು ತಲುಪಿ ನಂದಿಸಲು ವ್ಯವಸ್ಥಿತವಾದ ಯೊಜನೆಗಳನ್ನು ರೂಪಿಸುತ್ತದೆ. ಆದರೂ, ಬೆಂಕಿ ಬಿದ್ದಾಗ ಇಲಾಖೆಯ ಜನರು ಪಡುವ ಪಾಡು ಅಷ್ಟಿಷ್ಟಲ್ಲ. ಕಾಡಿನ ಯಾವುದೇ ಮೂಲೆಯಲ್ಲಿ ಬೆಂಕಿಬಿದ್ದರೂ ದುರ್ಗಮವಾದ ಕಾಡುಹಾದಿಗಳಲ್ಲಿ ಅದನ್ನು ನಂದಿಸಲು ತೆರಳಬೇಕು, ಬಹಳಷ್ಟುಸಲ ಬಹುದೂರ ಕಾಲ್ನಡಿಗೆಯಲ್ಲಿ, ಕಲ್ಲು ಮುಳ್ಳುಗಳಹಾದಿಯಲ್ಲಿ, ಗುಡ್ಡಗಳನ್ನು ಏರಿತ್ತಾ ಶೀಘ್ರವಾಗಿ, ಪ್ರಾಣಿಗಳ ಭಯವಿದ್ದರೂ ಪ್ರಾಣವನ್ನು ಲೆಕ್ಕಿಸದೆ ಬೆಂಕಿಯೊಂದಿಗೆ ಹೋರಾಡಬೇಕು. ಎಕರೆಗಟ್ಟಲೆ ಪ್ರದೇಶಕ್ಕೆ ಬೆಂಕಿ ಬಿದ್ದರೂ ಅದನ್ನು ನಂದಿಸಲು ಸಿಗುವುದು ಬೆರಳೆಣಿಕೆಯಷ್ಟು ಜನರು ಮಾತ್ರ. ಕಷ್ಟಪಟ್ಟು ಅಲ್ಲಿಗೆ ತಲುಪಿದರೂ ಬೆಂಕಿಯನ್ನು ನಂದಿಸಲು ಅವರಲ್ಲಿ ಸರಿಯಾದ ಸಲಕರಣೆಗಳು ಇರುವುದಿಲ್ಲ. ಗಿಡಗಳ ಸಣ್ಣಸಣ್ಣ ರೆಂಬೆಕೊಂಬೆ, ಸೊಪ್ಪುಸೆದೆಗಳನ್ನು ಮುರಿದುಕೊಂಡು ಬೆಂಕಿಯನ್ನು ಹೊಡೆಯುತ್ತಾ ನಂದಿಸಲು ಪ್ರಯತ್ನಿಸುತ್ತಾರೆ. ಗಾಳಿ ಬೀಸಿದಂತೆ ಕ್ಷಣಮಾತ್ರದಲ್ಲಿ ಸುತ್ತಲೂ ಹಬ್ಬುವ ಬೆಂಕಿಯಿಂದ ಕೆಲವೊಮ್ಮೆ ಪ್ರಾಣಕ್ಕೂ ಅಪಾಯವಿದೆ. ಕಷ್ಟಪಟ್ಟು ಬೆಂಕಿನಂದಿಸುವ ಪ್ರಯತ್ನಮಾಡಿದರೂ ಅವರಿಗೆ ನೀರಾಗಲೀ, ಕೈಗವಸಾಗಲೀ, ಬೆಂಕಿನಿರೋಧಕ ಬಟ್ಟೆಯಾಗಲೀ ಅಥವಾ ಸಹಾಯಕ್ಕೆ ಇನ್ನೊಂದು ತಂಡವಾಗಲೀ ಇರುವುದಿಲ್ಲ. ಏನೇ ಆದರೂ ಬೆಂಕಿಯೊಂದಿಗೆ ಹೋರಾಡಿ ಗೆಲ್ಲಲೇಬೇಕು, ಕಾಡನ್ನು, ಕಾಡುಪ್ರಾಣಿಗಳನ್ನು, ರಕ್ಷಿಸಲೇಬೇಕು.
ಹೀಗೆ ಬೆಂಕಿಯೊಂದಿಗೆ ಸೆಣಸುವ ಮಂದಿಯಲ್ಲಿ ಬಹಳಷ್ಟು ಜನ ಇಲಾಖೆಯಲ್ಲಿ ಕಾಯಂ ಅಲ್ಲದ, ದಿನಗೂಲಿಗಾಗಿ ಕೆಲಸ ಮಾಡುವ ವೀಕ್ಷಕರು. ಬರಿಗಾಲಿನಲ್ಲಿ ಕಾಡು ಅಲೆದು, ಕಳ್ಳರೊಂದಿಗೆ, ಬೇಟೆಗಾರರೊಂದಿಗೆ ಸೆಣಸುವ ಇವರದ್ದು ಇಲಾಖೆಯಲ್ಲಿ ತೀರ ನಿರ್ಲಕ್ಷಕ್ಕೊಳಗಾದ ವರ್ಗ. ಕಡಿಮೆ ಸೌಲಭ್ಯದಲ್ಲಿ ಹೆಚ್ಚು ಕೆಲಸ ಮಾಡಿದರೂ ಸಿಗುವ ಸಂಬಳ ಸುಮಾರು 3400 ರೂ, ಅದೂ ಕೆಲವು ತಿಂಗಳಿಗೊಮ್ಮೆ ಕೈಸೇರುತ್ತದೆ. ಅಷ್ಟರಲ್ಲೇ ಅವರ ಸಂಸಾರ, ಮಕ್ಕಳ ಶಿಕ್ಷಣ ಎಲ್ಲವೂ ನಡೆಯಬೇಕು. ಕರ್ತವ್ಯದ ಸಮಯದಲ್ಲಿ ಪ್ರಾಣ ಕಳೆದುಕೊಂಡರೂ ಇವರಿಗೆ ವಿಮೆಯಾಗಲೀ, ಪರಿಹಾರವಾಗಲೀ ಇಲ್ಲ. ಇವರ ನಂತರ ಬರುವ ಗಾರ್ಡಗಳ ಸ್ಥಿತಿಯೇನೂ ಹೇಳಿಕೊಳ್ಳುವಂತಹದ್ದಲ್ಲ. ಇಂದು ಒಬ್ಬ ಗಾರ್ಡ ಸುಮಾರು 5000 ಎಕರೆಯಷ್ಟು ಕಾಡನ್ನು ಕಳ್ಳಕಾಕರಿಂದ, ಬೇಟೆಗಾರರಿಂದ ಹಾಗು ಕಾಡ್ಗಿಚ್ಚಿನಿಂದ ರಕ್ಷಿಸಬೇಕಿದೆ. ಸುಮಾರು 900 ಚ.ಕಿಮೀಯಷ್ಟು ವ್ಯಾಪಿಸಿರುವ ದಾಂಡೇಲಿಯಂಥ ಕಾಡನ್ನು ರಕ್ಷಿಸಲು ಇರುವ ವೀಕ್ಷಕರ ಸಂಖ್ಯೆ ಕೇವಲ 4! ನಾಗರಹೊಳೆಯಂತಹ ರಕ್ಷಿತಾರಣ್ಯದಲ್ಲಿ ಇಂದು 50%ಕ್ಕಿಂತಲೂ ಅಧಿಕ ಗಾರ್ಡ ಹಾಗು ವೀಕ್ಷಕರ(ವಾಚರ್) ಹುದ್ದೆಗಳು ಖಾಲಿ ಇವೆ. ಹೀಗೆ ಸೌಲಭ್ಯ ಹಾಗು ಸಿಬ್ಬಂದಿ ಕೊರತೆಯಿಂದ ನಲುಗುತ್ತಿರುವ ಅರಣ್ಯ ಇಲಾಖೆಗೆ ಕಾಡ್ಗಿಚ್ಚು ಒಂದು ಸವಾಲಾಗಿ ಪರಿಣಮಿಸಿದೆ.
ಇಂದು ನಮ್ಮ ಅಮೂಲ್ಯ ಕಾಡುಗಳನ್ನು ಹಾಗು ಕಾಡುಪ್ರಾಣಿಗಳನ್ನು ಕಾಡ್ಗಿಚ್ಚಿನ ಅಪಾಯದಿಂದ ಪಾರುಮಾಡಬೇಕಿದೆ. ಇದಕ್ಕಾಗಿ ಕಾಡಿನ ಸುತ್ತಲೂ ವಾಸಿಸುವ ಜನರಲ್ಲಿ ಅರಿವು ಮೂಡಿಸುವ ಕೆಲಸವಾಗಬೇಕು. ಅರಣ್ಯ ಇಲಾಖೆ ಹಾಗು ಸ್ವಯಂಸೇವಾ ಸಮಸ್ಥೆಗಳು ಇದನ್ನು ಗುರಿಯಾಗಿಟ್ಟುಕೊಂಡು ಕಾರ್ಯಮಗ್ನವಾಗಬೇಕಿದೆ. ಕಾಡುಗಳ ಅವಶ್ಯಕತೆ, ಅದಕ್ಕೆ ಬೆಂಕಿ ಹಚ್ಚುವುದರಿಂದಾಗುವ ಪರಿಣಾಮ, ಬೇಟೆಗಾರರ ದುರಾಸೆ ಹಾಗು ಉಳಿದಿರುವ ಕಾಡನ್ನು ಉಳಿಸಲು ಮಾಡಬೇಕಿರುವ ಕೆಲಸದಬಗ್ಗೆ ಜನರ ಮನತಟ್ಟುವಂತೆ ತಿಳಿಹೇಳಬೇಕಿದೆ. ಹಾಗೆಯೇ ಇಲಾಖೆಯು ಕಾಡಿನಮೇಲೆ ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ಒತ್ತಡವನ್ನು ಎದುರಿಸಲು ಹಾಗು ಅದರ ವಿರುದ್ಧ ಕಾಡನ್ನು ರಕ್ಷಿಸಲು ತನ್ನ ಸಾಮಥ್ರ್ಯವನ್ನು ಬಲಪಡಿಸಿಕೊಳ್ಳಬೇಕು. ಉಳಿದಿರುವ ಖಾಲಿ ಹುದ್ದೆಗಳನ್ನು ತುಂಬುವುದು, ಕಾಡ್ಗಿಚ್ಚನ್ನು ತಡೆಗಟ್ಟಲು ವೈಜéಾನಿಕ ವಿಧಾನಗಳನ್ನು ಅನುಸರಿಸುವುದು, ಕಾಡಿನ ಸುತ್ತಲೂವಾಸಿಸುವ ಜನರ ವಿಶ್ವಾಸಗಳಿಸಿ ಕೆಲಸಮಾಡುವುದು ಹಾಗು ಸ್ವಯಂಸೇವಾ ಸಮಸ್ಥೆಗಳ ಸೇವೆಯನ್ನು ಬಳಸಿಕೊಳ್ಳುವ ಕೆಲಸ ಶೀಘ್ರವಾಗಿ ಆಗಬೇಕು. ಇದಲ್ಲದೆ ಜನಸಾಮಾನ್ಯರೂ ತಮ್ಮ ಸಮಥ್ರ್ಯಕ್ಕನುಗುಣವಾಗಿ ಕಾಡನ್ನು ರಕ್ಷಿಸುವ ಕಾರ್ಯದಲ್ಲಿ ಕೈಜೋಡಿಸಬೇಕು. ಏಕೆಂದರೆ ಕಾಡು ಬರೀ ಅರಣ್ಯ ಇಲಾಖೆಯ ಸ್ವತ್ತಲ್ಲ. ಅದು ನಮ್ಮೆಲ್ಲರ ಕಾಡು. ನಮ್ಮ ಜೀವನಕ್ಕೆ, ಬದುಕಿಗೆ ಅತ್ಯವಶ್ಯಕವಾದ ಕಾಡು. ಅದನ್ನು ಉಳಿಸುವ, ಬೆಳೆಸುವ ಬದುಕಿಸುವ ಜವಾಬ್ದಾರಿ ನಮ್ಮೆಲ್ಲರ ಹೆಗಲಮೇಲಿದೆ.
ಮಾಹಿತಿ ಮೂಲ: "ಕಾಡು ಉಳಿಸುವ ಬರಿಗಾಲಿನ ಯೋಧರು", ಸಂಜಯ ಗುಬ್ಬಿ
ಚಿತ್ರಗಳು: ಅರಣ್ಯ ವೈಲ್ಡೆಲೈಫ್ ಟ್ರಸ್ಟ್, ವೈಲ್ಡ್ಲೈಫ್ ಕನ್ಸರ್ವೇಶನ್ ಸೊಸೈಟಿ, ಬೆಂಗಳೂರು
ಲೇಖನ - ಹರೀಶ ಏನ್.ಎಸ್.
ಈ ಲೇಖನದ ಆಯ್ದ ಭಾಗವು ವಿಜಯ ಕರ್ನಾಟಕ ಪತ್ರಿಕೆಯ "ಸಂಪಾದಕೀಯ" ವಿಭಾಗದಲ್ಲಿ ದಿನಾಂಕ ೧೬ ಏಪ್ರಿಲ್ ೨೦೧೧ ರಂದು ಪ್ರಕಟವಾಗಿತ್ತು.
No comments:
Post a Comment
Note: Only a member of this blog may post a comment.